ತಟ್ಟೆಪಾದ -
ಸಹಜವಾಗಿ ಪಾದದಲ್ಲಿ ಇರಬೇಕಾದ ಕಮಾನು ಕುಸಿದು ಮಟ್ಟಸವಾಗಿರುವ ಸ್ಥಿತಿ.  ಚಪ್ಪಟೆ ಪಾದ ಪರ್ಯಾಯನಾಮ.  ಇಂಥ ಪಾದ ಹಿಮ್ಮಡಿಯೊಂದಿಗೆ ಆಚೆಗೆ ಹೊರಳಿ ಹರಡಿಕೊಂಡು ತಳವೆಲ್ಲ ನೆಲದ ಮೇಲಿರುವಂತಿರುತ್ತದೆ.

ಬೆಣೆಯಂಥ ಆಕಾರಗಳಲ್ಲಿ ಇರುವ ಹೆಚ್ಚು ಪಾದಾಸ್ಥಿಗಳ ಜೋಡಣೆಯಿಂದ ಪಾದದ ಕಮಾನಾಗುವುದು. ಸ್ನಾಯು (ಲಿಗಮೆಂಟ್) ಮತ್ತು ಪೇಶಿಗಳಿಂದ (ಮಸಲ್) ಕಮಾನು ಬಿಗಿಯಾಗಿರುತ್ತಾರೆ.   ಸ್ನಾಯುಗಳಲ್ಲಿ ಪಾದತಳಮಧ್ಯದಲ್ಲಿರುವ ಸ್ಪ್ರಿಂಗ್ ಸ್ನಾಯು ಮುಖ್ಯವಾದುದು.  ಇದು ಹರಿಯುವುದು ಬಲು ಅಪರೂಪ.  ಹಾಗೆ ಹರಿದಾಗ ಕಮಾನು ಕುಸಿಯುತ್ತದೆ.  ಮೂಳೆಗಳ ಆಕಾರ, ಸ್ನಾಯು, ಪೇಶಿಗಳಲ್ಲಿ ಬಿಲ್ಲಿನ ನಾಣಿನಂತಿರುವ ಪೇಶಿಗಳದೇ ಮುಖ್ಯ ಪಾತ್ರ.  ಎಲ್ಲರ  ಶೈಶವದಲ್ಲಿರುವ ಚಪ್ಪಟೆ ಪಾದ ವ್ಯಕ್ತಿ ನಡೆಯುವುದನ್ನು ರೂಢಿಸಿಕೊಂಡಂತೆ ಕಣ್ಮರೆಯಾಗುವುದಾದರೂ ಕೆಲವರಲ್ಲಿ ಸ್ನಾಯುಗಳು ಉದ್ದಗೊಂಡು ಪೇಶಿಗಳು ದುರ್ಬಲವಾಗುವುದರಿಂದ ಚಪ್ಪಟೆಯಾಗಿಯೇ ಉಳಿಯುತ್ತದೆ.  ಇದನ್ನು ಸಕಾಲದಲ್ಲಿ ಚಿಕಿತ್ಸಿಸಬಹುದು.  ಆದರೆ ಬರಬರುತ್ತ ಮೂಳೆಗಳ ಅಕಾರ ಬದಲಾಗುವುದರಿಂದ ಸುಲಭವಾಗಿ ಚಿಕಿತ್ಸೆಗೆ ಜಗ್ಗದ ತಟ್ಟೆಪಾದವಾಗುತ್ತದೆ.  ಕಮಾನಿರುವ ಪಾದ ಮನುಷ್ಯನಲ್ಲಲ್ಲದೆ ಇತರ ಯಾವ ಪ್ರಾಣಿಯಲ್ಲೂ ಇಲ್ಲ.

	
ತಟ್ಟೆಪಾದದ ಕಾರಣದ ವಿಚಾರ ನಮಗೆ ಸರಿಯಾಗಿ ಗೊತ್ತಿಲ್ಲ.  ಆಜನ್ಮವಾಗಿ ಆ ಕಮಾನು ಬೆಳೆಯದಿರುವ ಸ್ಥಿತಿಯೂ ಉಂಟು.   ಇದು ವಂಶಪರಂಪರೆಯಲ್ಲೇ ಅಥವಾ ಬುಡಕಟ್ಟಿನಲ್ಲೇ ಇರಬಹುದು.  ಉದಾಹರಣೆಗೆ ನೀಗ್ರೋಗಳ ಪಾದಗಳು ಸಾಮಾನ್ಯವಾಗಿ ಚಪ್ಪಟೆಯವು. ಇದರಿಂದ ಅವರ ಸಾಮಥ್ರ್ಯಕ್ಕೇನೂ ಕುಂದಿಲ್ಲ.   ಒಟ್ಟಿನಲ್ಲಿ ಹೇಳುವುದಾದರೆ ದೇಹದ ತೂಕಕ್ಕೂ ಅದನ್ನು ಹೊರಲು ಕೆಲಸ ಮಾಡುವ ಪಾದಗಳ ಪೇಶಿಗಳ ತ್ರಾಣಕ್ಕೂ ಇರಬಹುದಾದ ಅಪ್ರಮಾಣಯುತ ಬಾಂಧವ್ಯ ತಟ್ಟೆಪಾದಕ್ಕೆ ಕಾರಣ.  ಮೂಳೆ ಪೇಶಿಗಳ ರೋಗ ಅಥವಾ ಅಘಾತಗಳಿಂದ ಪಾದ ಚಪ್ಪಟೆ ಅಗುವುದುಂಟು.  ಮೂಳೆಗಳು ಜಜ್ಜಿ ಹೋಗುವುದರಿಂದ ಕೆಲವು ರೋಗಿಗಳಲ್ಲಿ ತಟ್ಟೆಪಾದ ಸ್ಥಿತಿ ಉಂಟಾಗುತ್ತದೆ.
ತಟ್ಟೆಪಾದಗಳಿಂದ ನೋವು, ಬಾವು, ಪೇಶಿಗಳ ಸೆಟೆತ, ಬಿಗಿಪಾದ, ಕಾಲೆಳೆಯುವಂಥ ಅವಲಕ್ಷಣ ನಡಿಗೆ ಮುಂತಾದವು ಆಗುತ್ತವೆಂದು ಹೇಳಲಾಗಿದೆ. ಪ್ರಾಯಶಃ ದೇಹದಲ್ಲಿ ಎಲ್ಲ ಪೇಶಿಗಳ ಸಹಜ ದುರ್ಬಲತೆಯಿಂದ ತಟ್ಟೆಪಾದಗಳೂ ಅವುಗಳಿಂದ ಆದವು ಎನ್ನಲಾದ ನೋವು, ಬಾವು, ಮುಂತಾದ ತೊಂದರೆಗಳೂ ಆಗಬಹುದು. ಇವು ಕೆಲವರಲ್ಲಿ ಮಾತ್ರ ಆಗುತ್ತದೆ. ತಟ್ಟೆಪಾದಗಳಿಂದ ಹಲವರಲ್ಲಿ ನಿಶ್ಯಕ್ತಿಯಾಗಲಿ ನೋವಾಗಲಿ ಇರುವುದಿಲ್ಲ.

   
ಹಿಮ್ಮಡಿ ಹಾಗೂ ಕಮಾನುಗಳ ಸರಿಯಾದ ಸ್ಥಿತಿಯನ್ನು ಹೊಂದಿದುವುದೇ ಚಿಕಿತ್ಸೆಯ ಗುರಿ, ಇದು ತಕ್ಕಂಥ ಆಧಾರಯುತ ಅಥವಾ ಆಧಾರರಹಿತ ಪಾಪಾಸುಗಳಿಂದ ಹಾಗೂ ಕಾಲು ಪಾದಗಳ ಪೇಶಿಗಳನ್ನು ಬಲಗೊಳಿಸುವುದರಿಂದ ಸಾಧ್ಯ. ನೋವು ಅತಿಯಾಗಿದ್ದಲ್ಲಿ, ಇಲ್ಲವೇ ಪಾದಗಳು ಅತಿ ಸುಲಭವಾಗಿ ಸೋತು ಹೋಗುವುದಿದ್ದಲ್ಲಿ ಆಧಾರಗಳ ಅವಶ್ಯಕತೆಯಿರುತ್ತದೆ. ಆದರೆ ಆಧಾರಗಳಿಂದ ಉಪಯೋಗವನ್ನು ಹೆಚ್ಚು ಮುಂದುವರಿಸುವುದರಿಂದ ಪೇಶಿಗಳೂ ದುರ್ಬಲಗೊಂಡು ಒಳಿತಿಗಿಂತ ಹೆಚ್ಚು ಹಾನಿ ಆಗಬಹುದು. ಶಸ್ತ್ರ ಚಿಕಿತ್ಸೆ ಅಗತ್ಯವಿರುವಂಥ ನೋವಿರುವ ಸಮತಲ ಪಾದಿಗಳ ಸಂಖ್ಯೆ ಅತಿ ಕಡಿಮೆ. ಅಂದವನ್ನು ಉಂಟು ಮಾಡಲು ಮಾತ್ರ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿರುವ ಪ್ರಮೇಯ ಬಹಳ ಅಪರೂಪ. 	 (ಎಂ.ಡಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ